ಶುಕ್ರವಾರ, ನವೆಂಬರ್ 22, 2013

ನಾ ನಡೆಯುವ ದಾರಿಯಲಿ..

ನಾ ನಡೆಯುವ ದಾರಿಯಲಿ
ಕಲ್ಲಿರಲಿ ಮುಳ್ಳಿರಲಿ
ನನ್ನೊಡನೆ ನಡೆಯುವವರ
ಪಾದದಡಿ ಹುಲ್ಲಿರಲಿ|

ನಾ ನಡೆಯುವ ದಾರಿಯಲಿ
ಬೆಟ್ಟಸಾಲುಗಳೇ ನಿಂತಿರಲಿ
ನನ್ನೊಡನೆ ನಡೆಯುವವರ
ದಿಟ್ಟತನಕೆ ಜಯವಿರಲಿ|

ನಾ ನಡೆಯುವ ದಾರಿಯಲಿ
ರಾಕ್ಷಸ ಕುಲವೇ ಎದುರಾಗಲಿ
ನನ್ನೊಡನೆ ನಡೆಯುವವರ
ರಕ್ಷಣೆ ಮರೆಯಾಗದಿರಲಿ|

ನಾ ನಡೆಯುವ ದಾರಿಯಲಿ
ಕ್ರೂರ ಮೃಗಗಳೇ ಬೆನ್ನಟ್ಟಲಿ
ನನ್ನೊಡನೆ ನಡೆಯುವವರ
ದೈರ್ಯವದು ದೃತಿಗೆಡದಿರಲಿ|

ನಾ ನಡೆಯುವ ದಾರಿಯಲಿ
ನೀರೊರತೆಯೂ ಇಲ್ಲದಿರಲಿ
ನನ್ನೊಡನೆ ನಡೆಯುವವರ
ದಾಹಕೆ ಕ್ಷೀರ ಸಾಗರವೇ ಹರಿಯಲಿ|

ನಾ ನಡೆಯುವ ದಾರಿಯಲಿ
ನಡತೆಗೆಟ್ಟವರೆಲ್ಲ ನಡೆದುಬರಲಿ
ನನ್ನೊಡನೆ ನಡೆಯುವವರ
ನಡತೆಯ ನೋಡಿ ಕಲಿಯಲಿ

ನಾ ನಡೆಯುವ ದಾರಿಯಲಿ
ನನ್ನವರಾರು ಇಲ್ಲದಿರಲಿ
ನನ್ನೊಡನೆ ನಡೆಯುವವರ
ಬೆನ್ನಿಗೆ ಬಂಧನದ ಆನಂದವಿರಲಿ..||

=ಸೂರ್ಯ*

ಪರಿಚಯ

ನಾನು ಸುರೇಶ.ಎಲ್.ರಾಜಮಾನೆ, ರನ್ನಬೆಳಗಲಿ ಅಂತ ಬಾಗಲಕೋಟ ಜಿಲ್ಲೆಯ ಮುಧೋಳ ತಾಲೂಕಿನ ರನ್ನಬೆಳಗಲಿ ನನ್ನೂರು.


ನನ್ನ ಜೀವನದ ಹಾದಿ ಹಾಗು ನಾ ನಡೆಯುವ ದಾರಿಯಲಿ ನಡೆದ ಹೆಜ್ಜೆಗಳನ್ನು ಇಲ್ಲಿ  ದಾಖಲಿಸುವ ಬಯಕೆಯಿಂದ ಈ ಬ್ಲಾಗ್ ನ ತೆರೆದಿರುತ್ತೆನೆ.

ಇಲ್ಲಿ ನನ್ನ ವಯಕ್ತಿಕ ಜೀವನವನ್ನು ನಿಮ್ಮೊಂದಿಗೆ ಹಂಚಿಕೊಳ್ಳುವ ಬಯಕೆ ನನ್ನದು..

ನಾ ನಡೆಯುವ ದಾರಿಯಲಿ ನನ್ನೊಡನೆ ನಡೆಯುವವರು ನೀವೆಲ್ಲ.. ನಾನೆಂದೂ ಒಂಟಿಯಲ್ಲ....!!

=ಸುರೇಶ್.ಎಲ್.ರಾಜಮಾನೆ, ರನ್ನಬೆಳಗಲಿ.
=ಸೂರ್ಯ*